info@arivu.org
+91 94822-77872
ಕನ್ನಡ  English 

ಚಲನ ಚಿತ್ರ ನಿರ್ದೇಶಕ ಶ್ರೀ ಪಿ.ಶೇಷಾದ್ರಿಯವರೊಡನೆ ಮಕ್ಕಳ ಸಂವಾದ

September 30, 2016 Arivu General

2004-05ನೇ ಸಾಲಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ಬೇರು”  6ನೇ ತರಗತಿ ವಿಧ್ಯಾರ್ಥಿಗಳಿಗೆ ಪಠ್ಯವಾಗಿದೆ.  ಭ್ರಷ್ಟ ವ್ಯವಸ್ಥೆಯಿಂದ ತನ್ನ ಮನೆಯನ್ನು ಮತ್ತು ತನ್ನ ಪ್ರಾಣವನ್ನೂ ಕಳೆದುಕೊಳ್ಳುವ ಬಡ ಗೊರವಯ್ಯನ ಕಥೆಯಿರುವ ಚಿತ್ರವನ್ನು ವೀಕ್ಷಿಸಿದ್ದ ಮಕ್ಕಳ ಮನದಲ್ಲಿ ಹಲವಾರು ಸಂಶಯಗಳು ಕುಡಿಯೊಡೆದಿದ್ದವು. ಇವನ್ನು ನಿವಾರಿಸಲೋ ಎಂಬಂತೆ,ಇದೇ ಸಂಧರ್ಭದಲ್ಲಿ ತಮ್ಮ ಕಾರ್ಯನಿಮಿತ್ತ ಮೈಸೂರಿಗೆ ಬಂದಿದ್ದ  ಚಿತ್ರದ ನಿರ್ದೇಶಕರಾದ ಶ್ರೀ ಪಿ.ಶೇಷಾದ್ರಿಯವರು ದಿನಾಂಕ 18.08.2016 ರಂದು  ಶಾಲೆಗೆ ಭೇಟಿ ನೀಡಿದರು.  ಮಕ್ಕಳೊಡನೆ ನಿರ್ದೇಶಕರ ಸಂವಾದವನ್ನು ಶಾಲೆಯ ಲತಾಮಂಟಪದಲ್ಲಿ  ಸಂಜೆ 3.30ಕ್ಕೆ ಆಯೋಜಿಸಲಾಯಿತು.  ಶ್ರೀ ಶೇಷಾದ್ರಿಯವರ ಭೇಟಿಯನ್ನು ವ್ಯವಸ್ಥೆಗೊಳಿಸಿದ ಪೋಷಕರಾದ ಶ್ರೀಮತಿ ಕುಸುಮ ಆಯರಹಳ್ಳಿ ಯವರೇ ಅತಿಥಿಗಳನ್ನು ಆಹ್ವಾನಿಸಿ ಮಕ್ಕಳಿಗೆ ಪರಿಚಯಿಸಿದರು. 9 ರಾಷ್ಟ್ರಪ್ರಶಸ್ತಿ ವಿಜೇತರಾದ ಶೇಷಾದ್ರಿಯವರು ಮಕ್ಕಳೊಡನೆ ಮುಕ್ತವಾಗಿ ಹರಟಿ ಅವರ ಪ್ರಶ್ನೆಗಳಿಗೆ ಉತ್ತರಿಸದ್ದಲ್ಲದೆ ಚಲನಚಿತ್ರದ ಪಾತ್ರಗಳು, ವಸ್ತ್ರಾಭರಣ, ಸುಳ್ಳನ್ನು ನೈಜವಾಗಿ ತೋರಿಸುವ ಸೂಕ್ಷ್ಮತೆಯ ಬಗ್ಗೆಯೂ ತಿಳಿಸಿದರು. ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಡಿದ್ದಲ್ಲದೆ ಕಲಾತ್ಮಕ ಚಿತ್ರಗಳ ಮಹತ್ವದ ಬಗ್ಗೆಯೂ ಮಕ್ಕಳಿಗೆ ತಿಳಿಸಿಕೊಟ್ಟರು. ಅರಿವು ಮಕ್ಕಳಲ್ಲಿನ ಪ್ರಶ್ನಿಸುವ ಮನೋಭಾವವನ್ನು ಪ್ರಶಂಸಿಸಿ ಒಂದು ಕಥೆ ಹೇಳಿ, ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಉತ್ತರಿಸುವವರಿಗೆ ಬಹುಮಾನವನ್ನು ನೀಡಲಾಗುವುದೆಂದು ತಿಳಿಸಿದರು.  ಆ ಕಥೆ ಹೀಗಿತ್ತು; ಒಂದು ಊರಿನಲ್ಲಿ ಒಬ್ಬ ಭಕ್ತನಿದ್ದ. ದೇವರು ಅವನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ “ಏನು ವರ ಬೇಕು ಕೇಳು ಮಗು “ಎಂದ. ಆ ಭಕ್ತ ಏನೂ ಕೇಳದ್ದಿದ್ದಾಗ ದೇವರು, “ನಾನು ನಿನಗೆ ಒಂದು ಕಣ್ಣು ಹೆಚ್ಚಿಗೆ ಕೊಡುತ್ತೇನೆ, ಎಲ್ಲಿ ಬೇಕು ಕೇಳು” ಎಂದನು.  ಕಥೆಯನ್ನು ಇಲ್ಲಿಗೆ ನಿಲ್ಲಿಸಿದ ಶೇಷಾದ್ರಿಯವರು, ಮಕ್ಕಳನ್ನು ಕುರಿತು ಆ ಭಕ್ತ ಕಣ್ಣು ಎಲ್ಲಿರಬೇಕೆಂದು ಕೇಳಿರಬಹುದು ಹೇಳಿ ಎಂದರು.  ಕತ್ತು, ಕೈ ಕಾಲು, ಬೆನ್ನು ಎಂದು ತಮಗೆ ತೋಚಿದ ಎಲ್ಲಾ ಉತ್ತರಗಳನ್ನೂ ಮಕ್ಕಳು ಹೇಳಿದರು.  ಆದರೆ ಸರಿಯಾದ ಉತ್ತರವನ್ನು ಮತ್ತು ಸೂಕ್ತ  ಸಮಜಾಯಿಷಿಯನ್ನು ಧೀರಜ್ ಎಂಬ ವಿದ್ಯಾರ್ಥಿ ನೀಡಿದನು.  ಆಗ ಶೇಷಾದ್ರಿಯವರು ಪ್ರತಿಕ್ರಿಯಿಸಿ ”ನಾನು  ಹೋದ ಕಡೆಯಲ್ಲೆಲ್ಲಾ ಈ ಪ್ರಶ್ನೆಯನ್ನು ಕೇಳಿದ್ದೇನೆ ಆದರೆ ‘ಕೈ’ ಎಂಬ ಭಾಗಶಃ ಉತ್ತರವನ್ನು ನೀಡಿದವನು ನೀನೇ!“ ಎಂದು ಅವನಿಗೆ ಬಹುಮಾನ ನೀಡಿದರು.  ನಂತರ ಕಥೆ ಮುಂದುವರೆಸುತ್ತಾ “ಆ ಭಕ್ತ ದೇವರನ್ನು ಬೆರಳ ತುದಿಯಲ್ಲಿ ಮೂರನೇ ಕಣ್ಣನ್ನು ಇಡು ಎಂದು ಕೇಳಿದನು, ಏಕೆಂದರೆ ಬೆರಳು ತೋರಿದ ದಿಕ್ಕಿನಲ್ಲಿ ನೋಡಬಹುದು” ಎಂದು ಹೇಳಿದರು.  ಕಥೆ ಮುಗಿದ ನಂತರ ಟ್ರಸ್ಟಿಯವರಾದ ಶ್ರೀ ಬರ್ಟಿ ಒಲಿವೇರಾ ರವರು ಅತಿಥಿಗಳಿಗೆ ವಂದಿಸಿದರು.  ಶಾಲೆಯಿಂದ ನಿರ್ಗಮಿಸುತ್ತ ಶ್ರೀ ಪಿ.ಶೇಷಾದ್ರಿಯವರು ಅರಿವಿನ ಈ ಭೇಟಿ ಸಂತಸದಾಯಕವಾಗಿತ್ತು ಮತ್ತೊಮ್ಮೆ ಬಂದು ಹೆಚ್ಚಿನ ಸಮಯ ಮಕ್ಕಳೊಡನೆ ಕಳೆಯುವುದಾಗಿ ತಿಳಿಸಿದರು.

img-20160825-wa0013img-20160825-wa0012img-20160824-wa0025img-20160824-wa0023img-20160824-wa0018


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME