info@arivu.org
+91 94822-77872
ಕನ್ನಡ  English 

ಪ್ರಕೃತಿ ಅಧ್ಯಯನ – ನಾಗರಹೊಳೆ ವನ್ಯಧಾಮ

September 10, 2016 Arivu Activities

ಅರಿವು ಶಾಲೆಯ ೧ ರಿಂದ ೪ನೇ ತರಗತಿಯಲ್ಲಿ ಅಭ್ಯಸಿಸುವ ಮಕ್ಕಳು ಪ್ರಕೃತಿ ಅಧ್ಯಯನಕ್ಕಾಗಿ ಈ ಬಾರಿ ಆಯ್ದುಕೊಂಡ ಸ್ಥಳ ‘ನಾಗರಹೊಳೆ ವನ್ಯಧಾಮ’.  ೪೦ ಜನರ ತಂಡವು ದಿನಾಂಕ ೧-೨ನೇ ಸೆಪ್ಟೆಂಬರ್ ೨೦೧೬ ರಂದು ನಾಗರಹೊಳೆಗೆ ಭೇಟಿ ನೀಡಿತು.  ಮೊದಲ ದಿನ ವನ್ಯಧಾಮದಲ್ಲಿ ವಿಹರಿಸಿ ಅಲ್ಲಿಯೇ ರಾತ್ರಿ ಕಳೆದು ಎರಡನೆಯ ದಿನ ‘ಇರುಪ್ಪು ಜಲಪಾತಕ್ಕೆ’ ಭೇಟಿ ನೀಡಿ ಮೈಸೂರಿಗೆ ಹಿಂದಿರುಗುವುದು ಕಾರ್ಯಕ್ರಮದ ಸ್ಥೂಲ ರೂಪ.  ಅದರಂತೆ, ೧ನೇ ತಾರೀಖು ಅಪರಾಹ್ನದ ಹೊತ್ತಿಗೆ ನಾಗರಹೊಳೆಯಯನ್ನು ತಲುಪಿದ ತಂಡವು, ಭೋಜನದ ನಂತರ ಅರಣ್ಯ ರಕ್ಷಕರೊಡನೆ ಕೆಲವು ಸಮಯ ಹರಟಿ ನಂತರ ವಾಹನದಲ್ಲಿ ಕಾಡಿನ ಪರ್ಯಟನೆಗೆ ಹೊರಟಿತು.  ಮಾರ್ಗ ಮದ್ಯದಲ್ಲಿ ಜಿಂಕೆ, ಕಡವೆ, ಕಾಡೆಮ್ಮೆಗಳಂತ ವನ್ಯಮೃಗಗಳನ್ನು ವೀಕ್ಷಿಸಿ, ಕಣ್ಣಿಗೆ ಕಂಡ ಹಲವಾರು ಮರ ಗಿಡಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸಿತು.  ಸುಮಾರು ೧.೫ ಗಂಟೆಗೂ ಹೆಚ್ಚು ಕಾಲ ಕಾಡಿನಲ್ಲಿ ಮಕ್ಕಳು ವಿಹರಿಸಿ ಅರಣ್ಯದ ಬಗೆಗೆ, ವನ್ಯ ಪ್ರಾಣಿಗಳ ಬಗೆಗೆ ಮತ್ತು ಜೀವ ವ್ಯವಿಧ್ಯತೆಯ ಬಗೆಗೆ ಉಪಯುಕ್ತ ಮಾಹಿತಿ ಸಂಗ್ರಹಿಸಿದರು.  ಈ ವನ್ಯಪಯಣವು ಮಕ್ಕಳಲ್ಲಿನ  ಕುತೂಹಲ ಮತ್ತು ಸಂದೇಹವನ್ನು ಕೆರಳಿಸಿ ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತು.  ಸಾಕಷ್ಟು ಚರ್ಚೆಯ ನಂತರ  ತಂಡವು ಭೋಜನ ಸ್ವೀಕರಿಸಿ ತಮಗಾಗಿ ವ್ಯವಸ್ಥೆಗೊಳಿಸಿದ್ದ ವಸತಿಯಲ್ಲಿ ವಿರಮಿಸಲು ತೆರಳಿತು.  ಕಾಡು ಹಲವಾರು ಕೌತುಕಗಳ ಆಗರ, ಅಂತಹ ದಟ್ಟ ಕಾಡಿನ ನಡುವೆ ಕಳೆಯುತ್ತಿರುವ ಒಂದು ರಾತ್ರಿಯನ್ನು ನಿದ್ರಿಸಿ ವ್ಯರ್ಥ ಮಾಡುವುದಿಲ್ಲ ಎಂಬಂತೆ ಮಕ್ಕಳು ಕಾಡಿನ ರೋಚಕತೆಯ ಬಗೆಗೆ ಚರ್ಚೆಯಲ್ಲಿ ತೊಡಗಿದ್ದರು.  ಕಾಡಿನ ನೀರವತೆ ಮತ್ತು ಆಗೊಮ್ಮೆ ಈಗೊಮ್ಮೆ ಕೇಳುತ್ತಿದ್ದ ವನ್ಯ ಪ್ರಾಣಿಗಳ ಕೂಗುಗಳು ಮಕ್ಕಳಲ್ಲಿ ಒಂದು ರೀತಿಯ ಅಂಜಿಕೆಯನ್ನುಂಟುಮಾಡಿ ನಿದ್ರಾದೇವಿಯನ್ನು ದೂರವಿಟ್ಟಿತು. ಒಂದು ಬದಲಾವಣೆಯೋ  ಎಂಬಂತೆ ಮರು ಮುಂಜಾನೆ ಮಕ್ಕಳ ಕಲರವವೇ ಹಕ್ಕಿಗಳನ್ಮು ಎಚ್ಚರಿಸಿತು!  ಸೂರ್ಯೋದಯಕ್ಕೇ ಕಾದಿದ್ದ ಮಕ್ಕಳು ನಡಿಗೆಯಲ್ಲಿ ಕಾನನ ದರ್ಶನಕ್ಕೆ ಹೊರಟರು.  ಸಾಕಷ್ಟು ಪರ್ಯಟನೆಯ ನಂತರ ಉಪಹಾರ ಸ್ವೀಕರಿಸಿದ ತಂಡವು ಕೊಡಗಿನ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಸೇರಿದ ಇರುಪ್ಪು ಜಲಪಾತಕ್ಕೆ ಪ್ರಯಾಣ ಬೆಳಸಿತು.  ಕಾವೇರಿ ನದಿಯ ಉಪನದಿಯಾದ ಲಕ್ಷ್ಮಣತೀರ್ಥ ನದಿಯು ಕುಟ್ಟ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮುಗಿಲೆತ್ತರದಿಂದ ಹಂತ ಹಂತವಾಗಿ ಭೂಮಿಗೆ ಧುಮ್ಮಿಕ್ಕಿ ಸುಂದರ ಜಲಪಾತವನ್ನು ಸೃಷ್ಟಿಸಿದೆ. ಭೋರ್ಗರೆಯುವ ಜಲಪಾತದ ರಭಸವು ನೀರಿನಲ್ಲಿ ಆಟವಾಡಲು ಹಂಬಲಿಸಿದ ಮಕ್ಕಳ ಮನಸ್ಸನ್ನು ಸ್ವಲ್ಪ ಮಟ್ಟಿಗೆ ನಿರಾಶೆಗೊಳಿಸಿತು.  ಆದರೂ, ಮಕ್ಕಳಿಗೆ ನಿರಾಸೆಯಾಗಬಾರದು ಎಂಬ ಉದ್ದೇಶದಿಂದ ಬಹಳ ಎಚ್ಚರಿಕೆಯಿಂದ ಮಾನವ ಸರಪಳಿಯನ್ನು ರಚಿಸಿ, ಜಲಪಾತದಲ್ಲಿ ಮಕ್ಕಳನ್ನು ಮೀಯಿಸಲಾಯಿತು ಮತ್ತು ಜಲಪಾತದ ಸುರಕ್ಷಿತ ಕೆಳ ಹಂತಗಳಲ್ಲಿ ಮಕ್ಕಳು ಕೊರೆಯುವ ಚಳಿಯನ್ನು ಲೆಕ್ಕಿಸದೆ ಮನತಣಿಯೆ ನೀರಿನಲ್ಲಿ ಆಟವಾಡಿದರು. ಎರಡು ದಿನ ಆಹ್ಲಾದಕರವಾಗಿ ಪ್ರಕೃತಿಯ ಮಡಿಲಲ್ಲಿ ಕಳೆದ ನಂತರ ಮಕ್ಕಳ ತಂಡವು ಇಚ್ಛೆಯಿಲ್ಲದೆ ಮೈಸೂರಿನೆಡೆಗೆ ಪ್ರಯಾಣ ಬೆಳೆಸಿತು.165161162166160156163157159168170171167169img-20160904-wa0029img-20160904-wa0043img-20160904-wa0024


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME