ಮಕ್ಕಳು ಖುಷಿಯಿಂದ ಶಾಲೆಗೆ ಹೋಗಿ ಕಲಿಯಬೇಕು ಮತ್ತು ಕಲಿಕೆ ಚಟುವಟಿಕೆ ಆಧಾರಿತವಾಗಿ ಹಾಗೂ ನಮ್ಮ ಸುತ್ತಲಿನ ಪರಿಸರದ ಮೂಲಕ ಆದಾಗ ಇದು ಸುಲಭವಾಗಿ ಸಾಧ್ಯವಾಗುತ್ತದೆಂಬುದು ನಮ್ಮ ನಂಬಿಕೆ. ಈ ರೀತಿಯ ಶಾಲೆ ಮೈಸೂರಿನಲ್ಲಿ ಇಲ್ಲದ ಕಾರಣ ಅರಿವು ೨೦೦೮ರಲ್ಲಿ ಲಿಂಗಾoಬುಧಿ ಪಕ್ಷಿಧಾಮದ ಪಕ್ಕದ ಸಾವಯವ ತೋಟದಲ್ಲಿ ಪ್ರಾರಂಭವಾಯಿತು. ಕಲಿಕೆ ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಪ್ರಪಂಚವನ್ನೇ ಶೋಧಿಸುವಂತೆ, ಅರಿಯುವಂತೆ ಆಗಬೇಕು ಮತ್ತು ವ್ಯಕ್ತಿತ್ವ ರೂಪುಗೊಳ್ಳಬೇಕು ಎಂಬುದು ಅರಿವು ಆಶಯ.
ಸಾಮಾಜಿಕಬದ್ದತೆ, ಪರಿಸರದಬಗ್ಗೆ ಕಾಳಜಿ ಹೊಂದಿರುವ ಮತ್ತು ಶಿಕ್ಷಣದಲ್ಲಿ ಆಸಕ್ತಿಯಿರುವ ವೈವಿಧ್ಯಮಯ ವೃತ್ತಿಗಳಲ್ಲಿ(ಶಿಕ್ಷಕರು, ಸರ್ಕಾರಿ ನೌಕರರು, ತಂತ್ರಜ್ಞರು, ವೈದ್ಯರು, ವಿಜ್ಞಾನಿಗಳು, ಗೃಹಿಣಿಯರು ) ತೊಡಗಿರುವ ಜವಾಬ್ದಾರಿಯುತ ಜನರ ಗುಂಪು ಈ ಶಾಲೆಯನ್ನು ಪ್ರಾರಂಭಿಸಿತು.
ಪ್ರಾಥಮಿಕ ಹಂತದಲ್ಲಿ ಮಗು ತನ್ನ ಸುತ್ತಲಿನ ಪರಿಸರದ ಭಾಷೆಯಲ್ಲಿ(ಆಡು ಭಾಷೆ) ಕಲಿತರೆ, ಕಲಿಕೆ ಸುಲಭ ಮತ್ತು ಅರ್ಥಪೂರ್ಣ ಎಂಬುದು ವೈಜ್ನಾನಿಕವಾಗಿ ಸಿದ್ಧವಾದ ಅಂಶ. ಇದು ನಮ್ಮ ನಂಬಿಕೆ ಕೂಡ. ಹೀಗಾಗಿ ಅರಿವು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ. ಮಗುವಿನ ಕುತೂಹಲ, ಪ್ರಶ್ನೆಗಳು, ಅಭಿವ್ಯಕ್ತಿ ಅದರ ಭಾಷೆಯಲ್ಲೇ ಆಗಬೇಕು – ಮಗುವಿನ ಸಹಜ ಕಲಿಕೆಗಾಗಿ.
ಪ್ರಪಂಚದಲ್ಲಿರುವ ಪ್ರತಿ ಮಗುವೂ ವಿಭಿನ್ನ ಮತ್ತು ವಿಶಿಷ್ಟ. ಸ್ಪರ್ಧೆಗಳಿಂದ ಧೀರ್ಘಾವದಿಯಲ್ಲಿ ಮಗುವಿನಲ್ಲಿ ಸೋತಾಗ ಕೀಳರಿಮೆ, ಗೆದ್ದಾಗ ಅಹಂಕಾರ ಬೆಳೆಯುವುದು ಸಹಜ.
ಅದರ ಬದಲಿಗೆ ಅರಿವುನಲ್ಲಿ ಪ್ರತಿ ಮಗುವಿನ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿ ನಿರಂತರವಾಗಿ ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ನಡುವೆ ಸ್ಪರ್ಧೆಯ ಬದಲು ಸಹಕಾರ ಮನೋಭಾವಕ್ಕೆ ಹೆಚ್ಚು ಉತ್ತೇಜನ ನೀಡಲಾಗುತ್ತದೆ.ಆತ್ಮವಿಶ್ವಾಸವನ್ನು ಬೆಳೆಸಲಾಗುತ್ತದೆ.
ಹೊಸ ಪರಿಸರಕ್ಕೆ ಮಕ್ಕಳು ಹೊಂದಿಕೊಳ್ಳುವಾಗ, ಹೊಸ ವಿಷಯಗಳನ್ನು ಕಲಿಯುವಾಗ ತಪ್ಪುಗಳಾಗುವುದು ಸಹಜ. ಹಾಗಾಗಿ ಅರಿವು ಶಾಲೆಯಲ್ಲಿ ಮಗುವಿನ ಕಲಿಕೆಯ ಪ್ರಕ್ರಿಯೆಯಲ್ಲಿ ತಪ್ಪುಗಳಾದಾಗ ಶಿಕ್ಷೆ ನೀಡುವ ಬದಲಾಗಿ ಮಗುವಿಗೆ ವೈಯುಕ್ತಿಕವಾಗಿವಾಗಿ ಗಮನ ಹರಿಸಿ, ವಿಭಿನ್ನ ರೀತಿಯಲ್ಲಿ ಕಲಿಸುವ ಪ್ರಯತ್ನ ಮಾಡಲಾಗುತ್ತದೆ. ಹೀಗಾಗಿ ಮಗುವಿಗೆ ಶಿಕ್ಷಿಸುವ ಅಗತ್ಯ ಬೀಳುವುದಿಲ್ಲ ಎಂಬುದು ನಮ್ಮ ಅನುಭವ ಮತ್ತು ನಂಬಿಕೆ.
(Violence is the weapon of the weak – ಮಹಾತ್ಮಾಗಾಂಧಿ)
ಶಾಲೆ ಇರುವುದು ಶಿಕ್ಷಣಕ್ಕಾಗಿ, ಶಿಕ್ಷೆಗಾಗಿ ಅಲ್ಲ.
ಮಾಹಿತಿಗಳನ್ನು ಬರೀ ಬಾಯಿ ಪಾಠ ಮಾಡಿ ಒಪ್ಪಿಸುವಂತೆ ಮಾಡುವುದು ಶಿಕ್ಷಣದ ಉದ್ದೇಶವಲ್ಲ. ಮಕ್ಕಳು ವಿಷಯಗಳ ಬಗ್ಗೆ ತಾರ್ಕಿಕವಾಗಿ ಯೋಚಿಸುವ ಹಾಗೆ ಮಾಡುವುದು ಶಿಕ್ಷಣದ ಉದ್ದೇಶ. ಹಾಗಾಗಿ ಅವರು ಕಲಿತಿರುವ ವಿಷಯಗಳ ಬಗ್ಗೆ ಪೋಷಕರು,ಶಿಕ್ಷಕರು ಮತ್ತು ಇತರರು ತಿಳಿದುಕೊಳ್ಳಲು/ಪರೀಕ್ಷಿಸಲು ಅನುವಾಗುವಂತೆ ವರ್ಷಕ್ಕೆ ೩ ಬಾರಿ ಕಲಿಕಾ ಪ್ರದರ್ಶನ ಇರುತ್ತದೆ. ಇದಲ್ಲದೆ ತಿಂಗಳಿಗೊಮ್ಮೆ ಪೋಷಕರು, ಮಗುವಿನ ತರಗತಿಯ ಶಿಕ್ಷಕರ ಜೊತೆ ಚರ್ಚಿಸಲು ಅನುವಾಗುವಂತೆ ಸಭೆ ಇರುತ್ತದೆ.
[ಮಕ್ಕಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕು – ಕುವೆಂಪು].
ವಿಜ್ಞಾನದ ಅರಿವನ್ನು ಮಕ್ಕಳಿಗೆ ಮೂಡಿಸಲು ಪ್ರಾಥಮಿಕ ವರ್ಗದಿಂದಲೇ ಪ್ರಾರಂಭಿಸಲಾಗುತ್ತದೆ. ಸುತ್ತಲಿನ ಪರಿಸರದಲ್ಲಿರುವ ನಿತ್ಯೋಪಯೋಗಿ ವಸ್ತುಗಳಬಗ್ಗೆ ಮಕ್ಕಳಲ್ಲಿ ಮೂಡುವ ಪ್ರಶ್ನೆಗಳನ್ನು ಪ್ರೋತ್ಸಾಹಿಸುವ ಮತ್ತು ಉತ್ತರಿಸುವ ಮೂಲಕ, ಮೂಲ ವಿಜ್ಞ್ಯಾನದಲ್ಲಿ ಆಸಕ್ತಿ, ಕುತೂಹಲ ಮೂಡಿಸಲಾಗುತ್ತಿದೆ.ಪ್ರಯೋಗಗಳನ್ನು ಒಂದನೇ ತರಗತಿಯಿಂದ ಸಾಧ್ಯವಾದ ಮಟ್ಟಿಗೆ ಮಕ್ಕಳಿಂದಲೇ ಮಾಡಿಸಿ ಅವರ ಅನುಭವದಿಂದ ಹುಟ್ಟುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ವಿಜ್ಞ್ಯಾನವನ್ನು ಕಲಿಸಲಾಗುತ್ತಿದೆ.
ಆರಂಭದಿಂದಲೇ ಹಾಡು, ನಾಟಕ, ಕುಶಲಕಲೆಗಳನ್ನು ಅವರಿಗೆ ಪರಿಚಯಿಸಿ, ಅವರ ಅಭಿವ್ಯಕ್ತಿಗೂ ಅವಕಾಶ ನೀಡುತ್ತಿದ್ದೇವೆ. ಶ್ರುತಿ ಮತ್ತು ತಾಳಬದ್ದವಾಗಿ ಹಾಡುವುದನ್ನು ಅಭ್ಯಾಸ ಮಾಡಿಸಲಾಗುತ್ತಿದೆ; ವರ್ಷದಲ್ಲಿ ಮಕ್ಕಳು ಕನಿಷ್ಠ ೩ ನಾಟಕಗಳಲ್ಲಿ ಭಾಗವಹಿಸುವ ಹಾಗೆ ಮಾಡಲಾಗುತ್ತಿದೆ. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಚಟುವಟಿಕೆಗಳ ಮೂಲಕ ಮಕ್ಕಳು ವಿಷಯಗಳನ್ನು ಕಲಿತಾಗ ಅದು ಹೊರೆ ಅನ್ನಿಸುವುದಿಲ್ಲ. ಆಸಕ್ತಿ ಮತ್ತು ಖುಷಿಯೂ ಹೆಚ್ಚುತ್ತದೆ. ಹೀಗಾಗಿ “ಅರಿವು”ನಲ್ಲಿ ಹೆಚ್ಚಾಗಿ ಚಟುವಟಿಕೆಗಳ ಮೂಲಕವೇ ಶಿಕ್ಷಣ.
“ಅರಿವು” ಶಾಲೆಯಲ್ಲಿ ಮಕ್ಕಳು ಪಠ್ಯ ಮತ್ತು ಪಟ್ಯೇತರ ವಸ್ತುಗಳನ್ನು ಉಪಯೋಗಿಸಿದ ನಂತರ ನಿಗದಿಪಡಿಸಿದ ಜಾಗಗಳಲ್ಲೇ ಇಡುವಂತೆ ಕಲಿಸಲಾಗುತ್ತಿದೆ. ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ವಸ್ತುಗಳನ್ನು, ಉಪಯೋಗಿಸಿದ ಜಾಗಗಳನ್ನು ತಾವೇ ಸ್ವಚ್ಛಪಡಿಸಿ ಇಟ್ಟು ಕೊಳ್ಳುವ ಹಾಗೆ ಮಾಡಲಾಗುತ್ತದೆ. ಶಾಲಾ ಅವರಣದಲ್ಲಿರುವ ತರಕಾರಿ ಮತ್ತು ಇತರೆ ಗಿಡಗಳನ್ನು ಬೆಳೆಸುವ ಜವಾಭ್ದಾರಿಯನ್ನೂ ಚಿಕ್ಕಂದಿನಿಂದಲೇ ನೀಡಲಾಗುತ್ತದೆ. ಮೌಲ್ಯಗಲನ್ನು ಆಚರಣೆ, ಉತ್ತಮ ವ್ಯಕ್ತಿಗಳೊಂದಿಗಿನ ಸಂವಾದ ಮತ್ತು ನೀತಿಕಥೆ ಹೇಳುವ ಮೂಲಕ ಬೆಳೆಸಲಾಗುತ್ತದೆ.
ನಮ್ಮ ಭೂಮಿಯ ಈಗಿನ ಮುಖ್ಯ ಸಮಸ್ಯೆಯಾದ “ಹವಾಮಾನಬದಲಾವಣೆ” ಮತ್ತು “ಜಾಗತಿಕ ತಾಪಮಾನ ಹೆಚ್ಚಳ”ದ ಬಗ್ಗೆ ಮಕ್ಕಳು ಮತ್ತು ಹಿರಿಯರಲ್ಲಿ ಅರಿವು ಮೂಡಿಸುವುದು ಪರಿಸರ ಮತ್ತು ವಿಜ್ಞಾನ ಸಂಪನ್ಮೂಲ ಕೇಂದ್ರದ ಉದ್ದೇಶ. ಪರಿಸರ ಮತ್ತು ಮೂಲ ವಿಜ್ಞ್ಯಾನದ (ಭೌತ , ರಸಾಯನ, ಗಣಿತ, ಜೀವಶಾಸ್ತ್ರ) ವಿಷಯಗಳನ್ನು ಚಟುವಟಿಕೆ ಮತ್ತು ಪ್ರಯೋಗಗಳ ಮೂಲಕ ಕಲಿಯುವುದು ಈ ಕೇಂದ್ರದ ಉದ್ದೇಶ. ಈ ಕೇಂದ್ರ ಭವಿಷ್ಯದ ವಿಜ್ಞ್ಯಾನಿ, ಅನ್ವೇಷಕರನ್ನು ರೂಪಿಸುವತ್ತ ಕಾರ್ಯನಿರ್ವಹಿಸುತ್ತದೆ.
ಅರಿವು ಶಾಲೆ ನಡೆಸಲು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ಅನುಮತಿ ಮತ್ತು ಮಾನ್ಯತೆ ಪಡೆಯಲಾಗಿದೆ. ದೇಶದ ಹಲವಾರು ಶಿಕ್ಷಣ ತಜ್ಞ್ಯರು ಮತ್ತು ಚಿಂತಕರು ಸೇರಿ ರೂಪಿಸಿದ ” ಶಿಕ್ಷಣ ನೀತಿ ೨೦೦೫ “, ಸಧ್ಯದ ಪರಿಸ್ಥಿತಿಯಲ್ಲಿ ಅರ್ಥಪೂರ್ಣವಾಗಿರುವುದರಿಂದ ಮತ್ತು ತಾರ್ಕಿಕವಾಗಿರುವುದರಿಂದ “ಅರಿವುಶಾಲೆ”ಯಲ್ಲಿ ಈ ನೀತಿಗೆ ಒತ್ತು ನೀಡುತ್ತೇವೆ.
ಅರಿವು ಬಳಗದ, ಶಾಲೆಯ ಎಲ್ಲಾ ಆಡಳಿತಾತ್ಮಕ , ಪಠ್ಯ ಹಾಗೂ ಪಠ್ಯೇತರ ಯೋಜನೆ ತಯಾರಿ ಮತ್ತು ಅನುಷ್ಠಾನಗೊಳಿಸುವ ಸಂಧರ್ಭಗಳಲ್ಲಿ, ಸದಸ್ಯರು, ಪೋಷಕರು ಸಕ್ರಿಯವಾಗಿ ಭಾಗವಹಿಸುವಂತೆ ಅವಕಾಶ ನೀಡಿ, ಪ್ರೋತ್ಸಾಹಿಸಲಾಗುತ್ತದೆ. ಸದಸ್ಯರ, ಪೋಷಕರ ಜ್ಞ್ಯಾನ ಮತ್ತು ಅನುಭವ ಮಕ್ಕಳಿಗೆ ಸಿಗುವಂತೆ ಯೋಜನೆಗಳನ್ನು ತಯಾರಿಸಲಾಗುತ್ತದೆ. ಇದರಿಂದ ಮಕ್ಕಳಲ್ಲೂ ಕೂಡ ಸಹಕಾರ ಮನೋಭಾವ, ನಾಯಕತ್ವದ ಗುಣಗಳು(ಜವಾಭ್ದಾರಿ) ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.ಮಕ್ಕಳಿಗೆ ಹಿರಿಯರ ಮಾದರಿ ದೊರೆಯುತ್ತದೆ.
ಮಕ್ಕಳು ಸ್ವತಃ ಅವರೇ ಯೋಚಿಸಿ ಕೆಲಸ ಮಾಡುವ ಹಾಗೆ ಚಟುವಟಿಕೆ ನೀಡಲಾಗುತ್ತದೆ.ಇದರಿಂದ ಅವರಲ್ಲಿ ಆತ್ಮವಿಶ್ವಾಸ, ಜವಾಬ್ದಾರಿ ಹಾಗೂ ಕುತೂಹಲ ಮನೋಭಾವ ಬೆಳೆಯುತ್ತದೆ.ಮನೆಯಲ್ಲಿ ಮಕ್ಕಳೇ ಮಾಡಲು ಸಾಧ್ಯವಾಗುವ ಚಟುವಟಿಕೆಗಳನ್ನು ಯೋಜಿಸಲಾಗುತ್ತದೆ. ಉದಾ: ೧.ನಿಮ್ಮ ಮನೆ ಹತ್ತಿರವಿರುವ ೫ ಮರಗಳ ಹೆಸರುಗಳನ್ನು ಬರೆದುಕೊಂಡು ಬಾ. ೨. ನಿಮ್ಮ ಮನೆಯ ಅಕ್ಕಪಕ್ಕದಲ್ಲಿರುವ ೫ ಮನೆಗಳಲ್ಲಿರುವವರ ಹೆಸರು ಮತ್ತು ಅವರಿಗಿರುವ ಪರಸ್ಪರ ಸಂಬಂದಗಳನ್ನು ಕೇಳಿ ಬರೆದುಕೊಂಡು ಬಾ.
ನಮ್ಮ ಶಾಲೆಯಲ್ಲಿ ಮಕ್ಕಳ ಕಲಿಕೆಯ ಮಾಪನ, ಕಲಿಕಾ ಪ್ರದರ್ಶನದ ಮೂಲಕ. ಈ ಪ್ರದರ್ಶನ ಹಿಂದಿನ ೩-೪ ತಿಂಗಳಲ್ಲಿ ಕಲಿತ ವಿಷಯಗಳನ್ನು ಆಧರಿಸಿರುತ್ತದೆ. ಎಲ್ಲಾ ವಿಷಯಗಳು – ವಿಜ್ನಾನ, ಭಾಷೆ, ಪರಿಸರ, ತೋಟ, ಸಹಪಠ್ಯ ಎಲ್ಲವನ್ನು ಒಳಗೊಂಡಿರುತ್ತದೆ. ಈ ಪ್ರದರ್ಶನಕ್ಕೆ ಪೋಷಕರು, ಬಳಗದ ಸದಸ್ಯರು, ಹಿತೈಷಿಗಳು ಎಲ್ಲರೂ ಆಗಮಿಸಬಹುದು.
ಪಠ್ಯೇತರ ಚಟುವಟಿಕೆಗಳಾದ ಆಟ, ಈಜು, ತಬಲಾ, ನೃತ್ಯ ಇವುಗಳನ್ನು ಮಕ್ಕಳಿಗೆ ಒಂದನೇ ತರಗತಿಯಿಂದಲೇ ಕಲಿಸಲಾಗುತ್ತದೆ. ಅರಿವು ಶಾಲೆಯಲ್ಲಿ ವಾರದಲ್ಲಿ ಒಂದು ಬಾರಿ ಮಕ್ಕಳೇ ನಿರಗ್ನಿ ಆಹಾರ ತಯಾರಿಸಿ ತಿನ್ನುತ್ತಾರೆ. ಆ ದಿನ ಅದರ ಮಹತ್ವದ ಬಗ್ಗೆ ತಿಳಿಸಲಾಗುತ್ತದೆ. ಶಾಲೆಯ ಗಿಡ, ಮರಗಳನ್ನು ಬೆಳೆಸುವ ಜವಾಭ್ದಾರಿಯನ್ನು ಮಕ್ಕಳೇ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಿಭಾಯಿಸುತ್ತಾರೆ. ಕೈತೋಟದಲ್ಲಿ ಪ್ರತಿ ದಿನವೂ ಕೆಲಸ ಮಾಡುವುದರಿಂದ ಪ್ರಾಯೋಗಿಕ ಜ್ಞ್ಯಾನವೂ ಹೆಚ್ಚುತ್ತದೆ.
ಪ್ರವಾಸದಿಂದ ಮನರಂಜನೆ, ಗಮನಿಸುವಿಕೆ, ಕಲಿಕೆ, ಆತ್ಮವಿಶ್ವಾಸ ಮತ್ತು ಜವಾಭ್ದಾರಿ ಬೆಳಯುವಂತೆ ಯೋಜಿಸಲಾಗುತ್ತದೆ. ಮೈಸೂರಿನ ಸುತ್ತಮುತ್ತಲಿನ ಅಪರೂಪದ ಕೆರೆಗಳು, ಪಕ್ಷಿಧಾಮಗಳು, ಸಂಗ್ರಹಾಲಯಗಳು, ಬೆಟ್ಟಗಳು,ಕಛೇರಿಗಳು (ಬ್ಯಾಂಕ್, ಅಂಚೆಕಚೇರಿ, ಪೋಲಿಸ್ ಟಾನೆ) ಆಸ್ಪತ್ರೆ, ಐತಿಹಾಸಿಕ ಕಟ್ಟಡ, ಜಾತ್ರೆ, ಸ್ಮಾರಕಗಳಿಗೆ ಪ್ರವಾಸ/ಭೇಟಿ ಆಯೋಜಿಸಲಾಗುತ್ತದೆ. ಹಾಗೆಯೇ ವರ್ಷಕ್ಕೆ ೨ ಸಾರಿ ಮೈಸೂರಿನ ಹೊರಗಿನ ಪಾರಂಪರಿಕ, ನೈಸರ್ಗಿಕ ಸ್ಥಳಗಳಿಗೆ ಕಾಡು, ಬೆಟ್ಟ, ಕವಿ ಮನೆಗಳಿಗೆ ಪ್ರವಾಸ ಏರ್ಪಾಡು ಮಾಡಲಾಗುತ್ತದೆ. ಹೋಗುವ ಮೊದಲು ಮಕ್ಕಳಿಗೆ ಆಯಾ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ, ಮಾರ್ಗದ ನಕ್ಷೆಗಳ ಪರಿಚಯ-ಅಧ್ಯಯನ ಮಾಡಿಸಲಾಗಿರುತ್ತದೆ.
(ಮೈಸೂರಿನ ಪಾರಂಪರಿಕ ಕಟ್ಟಡಗಳು, ನೀರು ಸರಬರಾಜು ಮಂಡಳಿ, ಅಗ್ನಿಶಾಮಕ ದಳ, ಕುಪ್ಪಳ್ಳಿ, ದ ರಾ ಬೇಂದ್ರೆಯವರ ಮನೆ ಇತ್ಯಾದಿಗಳಿಗೆ ೨೦೧೧ ರಲ್ಲಿ ಭೇಟಿಕೊಡಲಾಯಿತು)
ಒಂದು ಭಾಷೆಯಾಗಿ ಇಂಗ್ಲಿಷನ್ನು ಮಕ್ಕಳಿಗೆ ಕಲಿಸಲಾಗುತ್ತದೆ.ಇಂಗ್ಲೀಷ್ ಭಾಷೆಯನ್ನು ಮಕ್ಕಳು ಓದಲು, ಬರೆಯಲು ಮತ್ತು ಮಾತನಾಡುವಂತೆ ಚಟುವಟಿಕೆಗಳ ಮೂಲಕ ಕಲಿಸಲಾಗುತ್ತದೆ. ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿಯಲು ಅನುಕೂಲವಾಗುವಂತೆ ವಯಸ್ಸಿಗನುಗುಣವಾಗಿ ಇಂಗ್ಲೀಷ್ ನಾಟಕ, ಹಾಡು ಇತ್ಯಾದಿಗಳ ಕಲಿಕೆ ಇರುತ್ತದೆ.
ಮಕ್ಕಳಲ್ಲಿ ವಿಸ್ತೃತವಾಗಿ ವಿಷಯಗಳ ಬಗ್ಗೆ ಅರಿವು, ಸಂಸ್ಕೃತಿ, ಜವಾಬ್ಧಾರಿ, ನೈತಿಕತೆ, ಸಾಮಾಜಿಕ ಬದ್ಧತೆ ಮತ್ತು ಪರಿಸರ ಪ್ರೀತಿ ಬೆಳೆಯುವಂತೆ, ಅರಿವು ಶಾಲೆಯ ಪಠ್ಯ ಮತ್ತು ಸಹಪಠ್ಯದ ಕಾರ್ಯಯೋಜನೆ ಮಾಡಲಾಗಿದೆ. ಯಾವುದೇ ವಿಷಯ, ಭಾಷೆಗಳನ್ನು ಕಲಿಯುವ ರೀತಿಯನ್ನು ಕಲಿಸುವುದು ಮತ್ತು ಈ ಮೂಲಕ ಅವರಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಬೆಳೆಯುವಂತೆ ಯೋಜನೆ ರೂಪಿಸಲಾಗುತ್ತದೆ.
ಅರಿವು ಶಾಲೆಯಲ್ಲಿ ವಿಧ್ಯಾರ್ಥಿ ೧೦ನೇ ತರಗತಿಯ ತನಕ ಓದಿದರೆ, ನೈತಿಕತೆ,ಜವಾಭ್ದಾರಿ ವಿಷಯಗಳನ್ನು ಸ್ವಂತವಾಗಿ ಅಧ್ಯಯನ ಮಾಡುವ, ಕಲಿಯುವ ಗುಣಗಳನ್ನು ಹೊಂದಿರುತ್ತಾನೆ/ಳೆ. ಸಂಸ್ಕೃತಿ, ಕಲೆಗಳ ಬಗ್ಗೆ ಪರಿಚಯ ಹಾಗೂ ಗೌರವ, ತಮ್ಮ ಇಷ್ಟದ ವಿಷಯದಲ್ಲಿ ಹೆಚ್ಚಿನ ಪರಿಣಿತಿಯನ್ನೂ ಹೊಂದಿರುತ್ತಾರೆ. ಎಲ್ಲ ವಿಷಯಗಳನ್ನು ಸಮಗ್ರವಾಗಿ ನೋಡುವ ದೃಷ್ಟಿಕೋನ ಬೆಳೆದಿರುತ್ತದೆ. ಪರಿಸರ, ಸಮಾಜ, ಸಂಸ್ಕೃತಿ ಎಲ್ಲವುಗಳ ಬಗ್ಗೆ ಅರಿವು ಕಾಳಜಿ ಇರುತ್ತದೆ.ಯಾವುದೇ ಕ್ಷೇತ್ರದಲ್ಲಿ (ವಿಜ್ನಾನ, ಕಲೆ, ವ್ಯಾಪಾರ, ವೃತ್ತಿಪರ ಶಿಕ್ಷಣ) ಅವನು/ಳು ಮುಂದುವರೆಯಲು ಸಹಾಯಕ ವಾಗುತ್ತದೆ.
ಅರಿವು ಶಾಲೆಗೆ ಸೇರಿಸಲು ಯಾವುದೇ ಡೊನೇಷನ್(ದೇಣಿಗೆ)ಯನ್ನು ಪಡೆಯುವುದಿಲ್ಲ. ಕೇವಲ ಭೋಧಕ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಮಾತ್ರ ಪಡೆಯಲಾಗುತ್ತದೆ. ಆರ್ಹ ಮತ್ತು ಅವಶ್ಯಕತೆಯಿರುವ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ, ರಿಯಾಯಿತಿ ಶುಲ್ಕದ ವ್ಯವಸ್ಥೆಯೂ ಇದೆ. ಸಮಾಜದ ಹಲವು ಸಂವೇದನಾಶೀಲ ಹಿತೈಷಿಗಳ ದಾನದಿಂದ ಶಾಲೆಗೆ ಹೆಚ್ಚಿನ ಸಂಪನ್ಮೂಲ ಕ್ರೋಡೀಕರಣ ಮಾಡಲಾಗುತ್ತಿದೆ.
ಅ. ಖಾದಿ ಪರಿಸರ ಸ್ನೇಹಿ ಬಟ್ಟೆಯಾಗಿದೆ. ಖಾದಿ ಎಲ್ಲ ರೀತಿಯ ಹವೆಗೂ ಉತ್ತಮವಾದದ್ದು.
ಆ. ಖಾದಿಯು ದೇಶದ ಸ್ವಾತಂತ್ರ್ಯ ಚಳುವಳಿಯ ಪ್ರಮುಖ ಭಾಗವಾಗಿತ್ತು. ಅದಕ್ಕೊಂದು ಪರಂಪರೆ, ಇತಿಹಾಸವಿದೆ. ಖಾದಿಸ್ವಾತಂತ್ರ್ಯ, ಸ್ವಾವಲಂಬನೆ ಮತ್ತು ಸರಳತೆಯ ಸಂಕೇತ.
ಇ. ಖಾದಿ ದೇಶದ ಉದ್ದಗಲಕ್ಕೂ ಲಕ್ಷಾಂತರ ಬಡ ಕಾರ್ಮಿಕರಿಗೆ ಉದ್ಯೋಗಕಲ್ಪಿಸಿದೆ. ಖಾದಿ ತೊಡುವುದರಿಂದ ಪರೋಕ್ಷವಾಗಿ ಆ ಜನರಿಗೆ ನೆರವಾದಂತಾಗುತ್ತದೆ.

ನಿಮ್ಮಲ್ಲಿ ಏನಾದರೂ ಪ್ರಶ್ನೆ ಇದ್ದರೆ info@arivu.org ಗೆ ಮಾಡಿ.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.