ಪರಿಸರ ಸ್ನೇಹಿ ಕಟ್ಟಡಗಳು

ಅರಿವು ಶಾಲೆಯು ಮೈಸೂರಿನ ಲಿಂಗಾಂಬುಧಿ ಪಕ್ಷಿಧಾಮದ ಸುಂದರ ಪರಿಸರದಲ್ಲಿದೆ. ಚಿಟ್ಟೆಗಳು, ಪಕ್ಷಿಗಳು ಮತ್ತು ಹಾವುಗಳು ನಮ್ಮನ್ನು ಆಗಾಗ ಭೇಟಿ ಮಾಡುವ ಅತಿಥಿಗಳು. ಹೀಗಾಗಿ ನಮ್ಮಿಂದ ಅವುಗಳಿಗೆ ಏನೂ ತೊಂದರೆಯಾಗದಂತೆ ನಮ್ಮ ಚಟುವಟಿಕೆಗಳನ್ನು ನಡೆಸಬೇಕು.

ಚಿಟ್ಟೆ ಉದ್ಯಾನವನ

ಚಿಟ್ಟೆಗಳನ್ನು ಆಕರ್ಷಿಸುವಂತಹ ಹಲವು ಗಿಡ ಮರಗಳನ್ನು ನೆಟ್ಟಿದ್ದೇವೆ. ಮುಂದೆ ಇದೇ ಚಿಟ್ಟೆ ಉದ್ಯಾನವನವಾಗಿ ರೂಪುಗೊಳ್ಳಲಿದೆ.

ಸ್ಥಳೀಯ ಮರ ಗಿಡಗಳು

ನಾವು ಶಾಲೆಯಲ್ಲಿ ಹಲವಾರು ಸ್ಥಳೀಯ ಮರಗಿಡಗಳನ್ನು ಬೆಳೆಸಿದ್ದೇವೆ. ಇವು ಹತ್ತಿರದ ಪಕ್ಷಿಧಾಮದಿಂದ ಹತ್ತು ಹಲವು ಚಿಟ್ಟೆ ಮತ್ತು ಪಕ್ಷಿಗಳನ್ನು ಆಕರ್ಷಿಸುತ್ತವೆ.

ಮಣ್ಣಿನ ಟೊಳ್ಳು ಇಟ್ಟಿಗೆಗಳು

ನಮ್ಮ ಕಟ್ಟಡಗಳನ್ನು ಪರಿಸರ ಸ್ನೇಹಿ ಟೊಳ್ಳು ಇಟ್ಟಿಗೆಗಳಿಂದ ಕಟ್ಟಲಾಗಿದೆ. ಕನಿಷ್ಠ ಪ್ರಮಾಣದಲ್ಲಿ ಕಾಂಕ್ರೀಟ್ ಉಪಯೋಗಿಸಿದ್ದೇವೆ. ತೀರಾ ಅವಶ್ಯವಿರುವ ಕಟ್ಟಡಗಳನ್ನು ಮಾತ್ರ ಕಟ್ಟಲಾಗಿದೆ.

ಮಳೆ ನೀರು ಸಂಗ್ರಹಣೆ ಮತ್ತು ಮರುಬಳಕೆ

ಮಳೆ ನೀರನ್ನು ಸಂಗ್ರಹಿಸಲು ಮೂರು ತೊಟ್ಟಿಗಳನ್ನು ಕಟ್ಟಲಾಗಿದೆ. ಎರಡು ತೊಟ್ಟಿಗಳು ಭೂಮಿಯ ಮಟ್ಟದಲ್ಲಿದ್ದರೆ, ಮತ್ತೊಂದು ದೊಡ್ಡ ತೊಟ್ಟಿ ಭೂಮಿಗಿಂತ ಕೆಲಮಟ್ಟದಲ್ಲಿದೆ. ಈ ತೊಟ್ಟಿಗಳಲ್ಲಿ ಸಂಗ್ರಹವಾದ ನೀರನ್ನು ಶಾಲೆಯಲ್ಲಿ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಬಳಸಲಾಗುತ್ತದೆ. ನಮ್ಮ ನೀರಿನ ಅವಶ್ಯಕತೆಗಳನ್ನು ಕೊಳವೆ ಬಾವಿ ತೊಡದೇ, ಮಳೆ ನೀರು ಮತ್ತು ಹಳ್ಳಿಯ ಇತರೆ ನೀರಿನ ಮೂಲಗಳಿಂದ ತುಂಬಿಸಿಕೊಳ್ಳುವುದೇ ನಮ್ಮ ಗುರಿ.

ಸ್ವಾಭಾವಿಕ ಗಾಳಿ ಬೆಳಕು

ನಮ್ಮ ಇಂಧನ ಬಳಕೆಯನ್ನು ತಗ್ಗಿಸುವ ಉದ್ದೇಶದಿಂದ, ಪ್ರಾಕೃತಿಕವಾಗಿ ದೊರೆಯುವ ಗಾಳಿ ಬೆಳಕನ್ನೇ ಗರಿಷ್ಠ ಮಟ್ಟದಲ್ಲಿ ಬಳಸಲು ಸಾಧ್ಯವಾಗುವಂತೆ ಕಟ್ಟಡಗಳನ್ನು ಕಟ್ಟಲಾಗಿದೆ.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.