ನಾವು ಕೈಯ್ಯಾರೆ ಏನಾದರೂ ಮಾಡಿದಾಗಲೇ ಕಲಿಯುವುದು. ಇದು ಬಹಳ ಹಿಂದಿನ ಕಾಲದಿಂದಲೂ ತಿಳಿದಿರುವ ವಿಷಯ. ಆಧುನಿಕ ಸಂಶೋಧನೆಯೂ ಇದನ್ನು ಅನುಮೋದಿಸುತ್ತದೆ. ಮಕ್ಕಳನ್ನು ತುಂಬಿಸಬೇಕಿರುವ ಖಾಲಿ ಪಾತ್ರೆಗಳಂತೆ ಪರಿಗಣಿಸಿ ಉಪನ್ಯಾಸ ಮಾಡುವ ಪದ್ಧತಿ ನಿಷ್ಪ್ರಯೋಜಕ ಮಾತ್ರವಲ್ಲ, ಅಪಾಯಕಾರಿಯೆಂದೂ ತಿಳಿದಿದೆ.

ನಮ್ಮ ಶಾಲೆಯಲ್ಲಿ ಮಕ್ಕಳು ಅನುಭವದ ಮೂಲಕ, ಪ್ರಯೋಗಗಳ ಮೂಲಕ, ಮಾದರಿಗಳನ್ನು ಮಾಡುವುದರ ಮೂಲಕ, ಐತಿಹಾಸಿಕ ಮತ್ತು ಪ್ರಾಕೃತಿಕ ಸ್ಥಳಗಳನ್ನು ಭೇಟಿ ಮಾಡುವುದರಿಂದ, ಹಕ್ಕಿ ಮತ್ತು ಮರಗಳನ್ನು ಗಮನಿಸುವುದರಿಂದ, ಚರ್ಚೆ ಮಾಡುವುದರಿಂದ, ಆಟ ಆಡುವುದರಿಂದ, ಮತ್ತೂ ಹಲವಾರು ವಿಧಾನಗಳಿಂದ ಕಲಿಯುತ್ತಾರೆ.

ನಾವು ವಿಷಯಾಧಾರಿತ ಶಿಕ್ಷಣವನ್ನು ಅಂಗೀಕರಿಸಿದ್ದೇವೆ. ವಿಷಯಾಧಾರಿತ ಶಿಕ್ಷಣದಲ್ಲಿ, 3 ತಿಂಗಳ ಮಟ್ಟಿಗೆ ಒಂದು ವಿಷಯವನ್ನು ಆರಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳು ಆ ವಿಷಯದ ಎಲ್ಲ ಮಜಲುಗಳನ್ನೂ ಕಲಿಯುತ್ತಾರೆ. ಇದರಿಂದ ಕಲಿಕೆಯು ವಾಸ್ತವಕ್ಕೆ ಹತ್ತಿರವಾಗುತ್ತದೆ. ಉದಾಹರಣೆಗೆ, ನಮ್ಮ ಮಕ್ಕಳು ನೀರು ಮತ್ತು ಬಣ್ಣಗಳ ಬಗ್ಗೆ ಬಹಳಷ್ಟು ವಿಚಾರಗಳನ್ನು ಕಲಿತಿದ್ದಾರೆ. ನೀರಿನ ಬಗ್ಗೆ ಹಾಡೊಂದನ್ನು ರಚಿಸಿ, ನಾಟಕ ಆಡಿ, ಪ್ರಕೃತಿಯಲ್ಲಿ ನೀರಿನ ಪ್ರಾಮುಖ್ಯತೆಯನ್ನು ಚರ್ಚಿಸಲಾಯಿತು.

ನಾವು ಕಲಿಯಲು 'youtube education', ಖಾನ್ ಅಕಾಡೆಮಿ ಮುಂತಾದ ಆಧುನಿಕ ಆವಿಷ್ಕಾರಗಳ ಉಪಯೋಗ ಪಡೆದುಕೊಳ್ಳುತ್ತೇವೆ. ನಮಗೆ ನಮ್ಮ ಪರಂಪರೆ, ಸಂಸ್ಕೃತಿ, ಮತ್ತು ಪ್ರಾಚೀನ ತಿಳುವಳಿಕೆಯನ್ನೂ ಗೌರವಿಸುತ್ತೇವೆ. ಹೆಮ್ಮೆಯಿಂದ, ನಿರಾಯಾಸವಾಗಿ, ಸಮರ್ಥವಾಗಿ ಮಾತೃಭಾಷೆಯನ್ನು ಬಳಸಲು ಕಲಿಸುವುದು ನಮ್ಮ ಹಲವು ಉದ್ದೇಶಗಳಲ್ಲಿ ಒಂದು.

ಶಾಲೆ ಕಟ್ಟಡಕ್ಕೆ ಮಾತ್ರ ಸೀಮಿತವಾಗಿಲ್ಲದೇ, ಆಗಸದವರೆಗೂ ಚಾಚಿದೆ. ನಮ್ಮ ಶಾಲೆ ಇರುವುದು ಲಿಂಗಾಂಬುಧಿ ಪಕ್ಷಿಧಾಮದ ಪಕ್ಕದಲ್ಲಿ. ಮಕ್ಕಳ ಜೊತೆ, ನಾವು ಆಗಾಗ ಕೆರೆಗಳಿಗೆ ಭೇಟಿ ಕೊಡುತ್ತೇವೆ, ವಾಯು ವಿಹಾರಕ್ಕೆ ಹೋಗುತ್ತೇವೆ. ಮಣ್ಣಿನಲ್ಲಿ ಆಡುತ್ತೇವೆ. ನಲಿಯುತ್ತಾ ಕಲಿಸುವುದಕ್ಕೆ ,ಕಲಿಯುವುದಕ್ಕೆ ಪ್ರಯತ್ನಿಸುತ್ತೇವೆ.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.